ಖಾಸಿ ಭಾಷೆ-

	ಅಸ್ಸಾಂ ಪ್ರದೇಶದ ಖಾಸಿ ಮತ್ತು ಜೈಂತಿಯ ಪರ್ವತ ಪ್ರದೇಶಗಳ ಆದಿವಾಸಿ ಜನಾಂಗದ ಆಡುನುಡಿ. ಸಿಲ್ ಹೆಟ್ ಮತ್ತು ಕಾಚಾರ್ ಪ್ರದೇಶದ ಸುತ್ತುಮುತ್ತುಲೂ ಈ ಭಾಷೆಯನ್ನಾಡುವವರಿದ್ದಾರೆ. ಇದು ಆಸ್ಟ್ರಿಕ್ ಭಾಷಾ ಪರಿವಾರಕ್ಕೆ ಸೇರಿದ ಮೋನ್ ಖ್ಮೇರ್ ಉಪವರ್ಗಕ್ಕೆ ಸೇರಿದುದೆಂದು ವಿದ್ವಾಂಸರ ಅಭಿಪ್ರಾಯ. ಈ ವರ್ಗಕ್ಕೆ ಸೇರಿದ ಇತರ ಸೋದರ ಭಾಷೆಗಳು ಪೆಗು, ಕಾಂಬೋಡಿಯ, ಅನ್ನಂ, ಮೆಕೊಂಗ್ ದೇಶಗಳಲ್ಲಿ ಪ್ರಚಾರದಲ್ಲಿವೆ. ಭಾರತದಲ್ಲಿ ಖಾಸಿ ಮಾತಾಡುವವರ ಸಂಖ್ಯೆ 3,64,100. ಬೇಸಾಯ ಈ ಜನಾಂಗದ ಮುಖ್ಯ ಕಸಬು. ಶರೀರ ರಚನೆಯಲ್ಲಿ ಇವರು ಮಂಗೋಲಿಯನ್ ಜನಾಂಗದವರನ್ನು ಹೋಲುತ್ತಾರೆ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ರಾಬಿನ್ ಸನ್ ಎಂಬಾತ ಖಾಸಿ ಭಾಷೆಯ ವ್ಯಾಕರಣವೊಂದನ್ನು ರಚಿಸಿದ. ಆ ಶತಮಾನದ ಕೊನೆಯ ಭಾಗದಲ್ಲಿ ರೆವರೆಂಡ್ ರಾಬಟ್ರ್ಸ್ ಎಂಬಾತ ವ್ಯಾಕರಣ, ಶಬ್ದಕೋಶ ಮತ್ತು ಪಾಠಮಾಲೆಗಳನ್ನು ಸಿದ್ಧಪಡಿಸಿದ.

	ಭಾರತದ ಇತರ ಪ್ರಮುಖ ಆದಿವಾಸಿ ಭಾಷೆಗಳಾದ ಮುಂಡ ಭಾಷಾವರ್ಗದ ಭಾಷೆಗಳಿಗೂ ಖಾಸಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಖಾಸಿ ಭಾಷೆಯ ಧಾತುಗಳು ಏಕಾಕ್ಷರಿಗಳು ಮತ್ತು ವಾಕ್ಯದಲ್ಲಿ ಶಬ್ದಗಳ ಅನುಕ್ರಮ ಕರ್ತೃ, ಕ್ರಿಯಾಪದ ಮತ್ತು ಕರ್ಮಪದ-ಹೀಗೆ. ಶಬ್ದರಚನೆಯಲ್ಲಿ ಪರಸರ್ಗಗಳಿಗೆ ಬದಲಾಗಿ ಉಪಸರ್ಗಗಳಿವೆ. ಪದಾದಿಯಲ್ಲಿ ಸಂಧಿಸ್ವರಗಳು ಹೇರಳವಾಗಿ ಬರುತ್ತವೆ. ಶಬ್ದ ರಚನೆಯ ದೃಷ್ಟಿಯಿಂದ ಖಾಸಿ ಇಂಡೋ ಚೀನದ ಭಾಷೆಗಳಿಗೂ ಭಾರತದ ಭಾಷಾ ಪರಿವಾರಗಳಿಗೂ ಮಧ್ಯವರ್ತಿಯಾಗಿದೆ ಎನ್ನಬಹುದು.

	ಈ ಭಾಷೆಗೆ ಪ್ರತ್ಯೇಕವಾದ ಲಿಪಿಯಿಲ್ಲ. ಕ್ರೈಸ್ತ ಮಿಷನರಿಗಳು ಇದನ್ನು ರೋಮನ್ ಲಿಪಿಯಲ್ಲಿ ಬರೆಯಲಿಕ್ಕೆ ಪ್ರಾರಂಭಿಸಿದರು. ಖಾಸಿಯ ಧ್ವನಿ ವ್ಯವಸ್ಥೆಯಲ್ಲಿ ಕಂಡುಬರುವ ಮುಖ್ಯ ವೈಶಿಷ್ಟ್ಯಗಳೆಂದರೆ ತಾನ (ಟೋನ್) ಮತ್ತು ಕಂಠ್ಯಸ್ಪರ್ಶ. ಆಲ್ಲದೆ ಖಾಸಿ ಭಾಷೆಯಲ್ಲಿ ಮೂರ್ಧನ್ಯ ಧ್ವನಿಗಳಾದ ಟ, ಠ, ಡ, ಢ, ಣ, ಳ, ಷ ಕಂಡುಬರುವುದಿಲ್ಲ. ಅಲ್ಪಪ್ರಾಣ ಮಹಾಪ್ರಾಣ ವ್ಯತ್ಯಾಸವಿದೆ. ಆದರೆ ಚ, ಛ ಇಲ್ಲ. ಗ ಕಾರ ಅನುನಾಸಿಕದ ಜೊತೆಯಲ್ಲ್ಲಿಯೇ ಬರುತ್ತದೆ (ಙ್ಗ). ಅಯ್, ಆಯ್, ಅವ್, ಆವ್, ಎಯ್, ಏವ್ ಮುಂತಾದ ಹಲವಾರು ವಿಧದ ಸಂಯುಕ್ತ ಸ್ವರಗಳೂ ಇವೆ.

	ನಾಮಪದಗಳಲ್ಲಿ ಪುಲ್ಲಿಂಗ ಸ್ತ್ರೀಲಿಂಗ ಎಂಬ ಎರಡು ಬಗೆಯ ಲಿಂಗವಿವಕ್ಷೆಯಿದೆ. ಪ್ರಥಮ ಪುರುಷ ಸರ್ವನಾಮ ಲಿಂಗ ಹಾಗೂ ವಚನ ದ್ಯೋತಕವಾಗಿ ಪ್ರತಿಯೊಂದು ನಾಮಪದಕ್ಕೂ ಉಪಸರ್ಗದಂತೆ ಸೇರಿಕೊಳ್ಳುತ್ತದೆ-ಆಂಗ್ಲಭಾಷೆಯ ಆರ್ಟಿಕಲ್‍ಗಳಂತೆ. ಉದಾ: ಉ (ಪು. ಏಕವಚನ) ಉ ಬ್ರೀವ್=ಒಬ್ಬ ಮನುಷ್ಯ; ಕ (ಸ್ತ್ರೀ, ಏಕವಚನ) ಕ ಈಂಗ್=ಒಂದು ಮನೆ; ಕಿ (ಪು.ಬಹು) ಕಿಬ್ರೀವ್=ಮನುಷ್ಯರು-ಇತ್ಯಾದಿ.

	ನಾಮಪದಗಳಿಗೆ ಈ ಕೆಳಗಿನ ವಿಭಕ್ತಿ ಪ್ರತ್ಯಯಗಳು ಸೇರುತ್ತವೆ. ಈ ಪ್ರತ್ಯಯಗಳು ಪೂರ್ವಪ್ರತ್ಯಯಗಳು (ಉಪಸರ್ಗಗಳು) ಎಂಬುದು ಗಮನಾರ್ಹ. ಈ ಪ್ರತ್ಯಯಗಳಿಗೆ ಉ ಸೇರಿಸಿದರೆ ಪು. ಏಕವಚನ. ಕಿ ಸೇರಿಸಿದರೆ ಪು. ಬಹುವಚನವಾಗುತ್ತದೆ.
ದ್ವಿತೀಯಾ		ಇಯ      	ಇಯ ಉ ಬ್ರೀವ್=ಮನುಷ್ಯನನ್ನು
               			ಇಯ ಕಿ ಬ್ರೀವ್=ಮನುಷ್ಯರನ್ನು
ತೃತೀಯಾ		ದ       	ದ ಉ ಬ್ರೀವ್=ಮನುಷ್ಯನಿಂದ
               			ದ ಕಿ ಬ್ರೀವ್=ಮನುಷ್ಯರಿಂದ
ಚತುರ್ಥೀ		ಹ       	ಹ ಉ ಬ್ರೀವ್=ಮನುಷ್ಯನಿಗೆ
        		ಶ       	ಹ ಕಿ ಬ್ರೀವ್=ಮನುಷ್ಯರಿಗೆ
        		ಇಯ
ಪಂಚಮೀ		ನ      	ನ ಉ ಬ್ರೀವ್=ಮನುಷ್ಯನಿಂದ
                			ನ ಕಿ ಬ್ರೀವ್=ಮನುಷ್ಯರಿಂದ
ಷಷ್ಠೀ      		ಜೋಂಗ್    	ಜೋಂಗ್ ಉ ಬ್ರೀವ್=ಮನುಷ್ಯನ
 
               			ಜೋಂಗ್ ಕಿ ಬ್ರೀವ್=ಮನುಷ್ಯರ
ಸಪ್ತಮೀ      		ಹ      	ಹ ಉ ಬ್ರೀವ್=ಮನುಷ್ಯನಲ್ಲಿ
 
               			ಹ ಕಿ ಬ್ರೀವ್=ಮನುಷ್ಯರಲ್ಲಿ

	ನಾಮಪದವನ್ನು ವಿಶೇಷಣವನ್ನಾಗಿ ಪರಿವರ್ತಿಸಲು ಬ ಉಪಸರ್ಗ ಸೇರಿಸಬೇಕು. ಭಾ=ಒಳ್ಳೆಯತನ ಬಭಾ=ಒಳ್ಳೆಯ. ವಿಶೇಷಣ ವಿಶೇಷ್ಯಕ್ಕೆ ಪರವಾಗಿ ಬರುತ್ತದೆ. ಅಂದರೆ ವಿಶೇಷ್ಯ ಮೊದಲು ಆಮೇಲೆ ವಿಶೇóಣ. ಉ ಬ್ರೀವ್ ಬಭಾ=ಮನುಷ್ಯ ಒಳ್ಳೆಯ ಅಥವಾ ಒಳ್ಳೆಯ ಮನುಷ್ಯ.

	ಕ್ರಿಯಾ ಧಾತುಗಳು ಏಕಾಕ್ಷರಿಗಳಾದ ಮೂಲಧಾತುಗಳಾಗಿರಬಹುದು, ಅಥವಾ ಉಪಸರ್ಗಗಳನ್ನು ಹಚ್ಚುವುದರಿಂದ ಸಾಧಿತವಾದ ಸಂಯುಕ್ತಧಾತುಗಳಾಗಿರಬಹುದು. ಸಂಯುಕ್ತ ಧಾತುಗಳಿಗೆ ಉದಾಹರಣೆ.	

	ಪ್ರೇರಣಾರ್ಥಕ: ಇಯಪ್=ಸಾಯು, ಪ್ಯಿನ್ ಇಯಪ್=ಕೊಲ್ಲು

	ಪುನರುಕ್ತ: ಇಯಾಮ್=ಅಳು, ಇಯೈ ಇಯಾಮ್=ಅಳುತ್ತಿರು

	ಅನ್ಯೋನ್ಯಬೋಧಕ: ಇಯೈತ್=ಪ್ರೀತಿಸು ಇಯ ಇಯೈತ್ ಪರಸ್ಪರ ಪ್ರೀತಿಸು.

	ಪುರುಷ ಮತ್ತು ವಚನ ಸೂಚಕವಾಗಿ ಪ್ರತ್ಯಯಗಳಿಗೆ ಬದಲಾಗಿ ಸರ್ವನಾಮಗಳೇ ಉಪಯೋಗಿಸಲ್ಪಡುತ್ತವೆ. ವರ್ತಮಾನ ಕಾಲದಲ್ಲಿ ಧಾತುವಿಗೆ ಪ್ರತ್ಯಯ ಸೇರುವುದಿಲ್ಲ. ಭೂತಕಾಲ ಪ್ರತ್ಯಯ ಲ, ಭವಿಷ್ಯತ್ ಕಾಲ ಪ್ರತ್ಯಯ ನ್.
			ಙ್ಗÁ  ಲೊಂಗ್=ನಾನು ಇದ್ದೇನೆ
			ಙ್ಗÁ  ಲ ಲೊಂಗ್=ನಾನು ಇದ್ದೆ
			ಙ್ಗÁನ್  ಲೊಂಗ್=ನಾನು ಇರುವೆನು

	ನಿಷೇದಾರ್ಥ ಪ್ರತ್ಯಯ ಮ್, ಙ್ಗÁಮ್ ಥೋಹ್=ನಾನು ಬರೆಯುವುದಿಲ್ಲ. ತಾತ್ಕಾಲಿಕ ವರ್ತಮಾನ ಪ್ರತ್ಯಯ ದ. ಙ್ಗÁದ ತ್ರೆಯಿ=ನಾನು ಕೆಲಸ ಮಾಡುತ್ತಿದ್ದೇನೆ.

	ಖಾಸಿ ವಾಕ್ಯರಚನೆಯ ಮುಖ್ಯ ವೈಶಿಷ್ಟ್ಯವನ್ನು ಹಿಂದೆಯೇ ತಿಳಿಸಿದೆ.

	ಖಾಸಿ ಭಾಷೆಗೆ ಹಲವಾರು ಉಪಭಾಷೆಗಳಿವೆ. ಅವುಗಳಲ್ಲಿ ಗಾರೊ ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಲೈಂಗ್ ಙ್ಗÁಮ್, ಜೈಂತಿಯಾದ ಪೂರ್ವಭಾಗದಲ್ಲಿ ಪ್ರಚಾರದಲ್ಲಿರುವ ಸಿಂತೆಂಗ್, ಖಾಸಿ ಜಿಲ್ಲೆಯ ಆಗ್ನೇಯ ಭಾಗದಲ್ಲಿ ಆಡುನುಡಿಯಾಗಿರುವ ವಾರ್ ಮುಂತಾದವು ಪ್ರಮುಖವಾದವು.         						(ಯು.ಪಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ